ಮೆಟಲೊಗ್ರಫಿ -
 	ಲೋಹ ಮತ್ತು ಮಿಶ್ರಲೋಹಗಳ ರಚನೆಯ ಅಧ್ಯಯನ, ಇದಕ್ಕಾಗಿ ಬೇರೆ ಬೇರೆ ವಿಧಾನಗಳನ್ನು ಅನುಸರಿಸುವುದಿದೆ. ಪ್ರಮುಖವಾಗಿ ವಿಶೇಷ ಬಗೆಯ ಪ್ರಕಾಶೀಯ ಸೂಕ್ಷ್ಮದರ್ಶನ (ಅಪ್ಟಿಕಲ್ ಮೈಕ್ರೊಸ್ಕೊಪಿ), ಎಲೆಕ್ಟ್ರಾನ್ ಸೂಕ್ಷ್ಮದರ್ಶನ ಹಾಗೂ ಎಕ್ಸ್‍ಕಿರಣ ನಮನ (ಎಕ್ಸ್‍ರೇ ಡಿಫ್ರ್ಯಾಕ್ಷನ್) ವಿಧಾನಗಳ ಬಳಕೆ ಇಲ್ಲಿದೆ. ಒಂದು ಕಾಲಕ್ಕೆ ಮೆಟಲೊಗ್ರಫಿಯನ್ನು ಲೋಹಗಳ ರಚನೆ ಮತ್ತು ಗುಣಲಕ್ಷಣಗಳಿಗೆ ಸಂಬಂಧಿಸಿದ ವಿಜ್ಞಾನ ಎಂಬುದಾಗಿ ಪರಿಗಣಿಸಲಾಗಿತ್ತು. ಈ ವಿಜ್ಞಾನವಿಭಾಗವನ್ನು ಈಗ ಭೌತಲೋಹವಿಜ್ಞಾನ (ಫಿಜಿಕಲ್ ಮೆಟಲರ್ಜಿ) ಎನ್ನುವುದಿದೆ.

ರಾಚನಿಕ ಗುಣಲಕ್ಷಣಗಳನ್ನು ಕಂಡುಕೊಳ್ಳುವ ಸಲುವಾಗಿಯೇ ವಿಶೇಷವಾಗಿ ನಿರ್ಮಿಸಿದಂಥ ಮೇಲ್ಮೈಗಳ ಮೇಲೆ ಬೆಳಕು ಪ್ರತಿಫಲಿಸುವಂತೆ ಮಾಡಿ ಲೋಹಗಳ ಪ್ರಕಾಶೀಯ ತಂತ್ರವನ್ನು ನಡೆಸುವುದಿದೆ. ಇಂಥ ವಿಧಾನದಲ್ಲಿ ಸುಮಾರು 200 ನ್ಯಾನೊಮೀಟರುಗಳಷ್ಟು (1 ನ್ಯಾನೊಮೀಟರ್ = 1 ಮಿಲಿಮೀಟರಿನ 1 ದಶಲಕ್ಷದಷ್ಟು ಭಾಗ) ವಿಭಜನೆಯನ್ನೂ (ರೆಸೊಲ್ಯೂಷನ್) 2000 ( ನಷ್ಟು ರೇಖೀಯ ಪ್ರವರ್ಧನೆಯನ್ನೂ (ಲೀನಿಯರ್ ಮ್ಯಾಗ್ನಿಫಿಕೇಷನ್) ಪಡೆಯಬಹುದು. ಸಾಮಾನ್ಯವಾಗಿ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ವಿಧಾನವನ್ನು ಪ್ರತಿಚಯ ಮೇಲ್ಮೈಗಳ ತದ್‍ವತ್ ರೂಪಗಳಿಂದಲೊ (ರಿಪ್ಲಿಕಾಸ್) ಬೃಹದ್ಗಾತ್ರ ಪ್ರತಿಚಯದಿಂದ ತೆಗೆದ ತೆಳುಪದರಗಳಿಂದಲೊ (ತಿನ್‍ಫಿಲ್ಮ್ಸ್) ಬಳಸುವುದಿದೆ.  ಪ್ರತಿರೂಪ ತಂತ್ರದಿಂದ (ರಿಪ್ಲಿಕ ಟೆಕ್ನಿಕ್) 5 ನ್ಯಾನೋಮೀಟರುಗಳಷ್ಟು ಕಡಿಮೆ ಮೌಲ್ಯದ ವಿಭಜನೆ ಮತ್ತು 5,000 ( ಮೌಲ್ಯದ ಪ್ರವರ್ಧನೆಗಳು ಒದಗುತ್ತವೆ.  ತೆಳುಪದರದ ತಂತ್ರದಿಂದ 1 ನ್ಯಾನೋಮೀಟರಿಗಿಂತಲೂ ಉತ್ತಮ ತೆರನ ವಿಭಜನೆ ಮತ್ತು 5,00,000 ( ದಷ್ಟು ಪ್ರವರ್ಧನೆಗಳು ಸಾಧ್ಯ.

ಸಂಶೋಧನೆ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಮೆಟಲೊಗ್ರಫಿಯ ಪಾತ್ರ ಹಿರಿದು. ಪ್ರಕಾಶೀಯ ಸೂಕ್ಷ್ಮದರ್ಶನ ವಿಧಾನವಾದರೊ ಲೋಹವ್ಯವಸ್ಥೆಗಳ ಪ್ರಾವಸ್ಥಾಪ್ರಕೃತಿಯ (ಫೇಜ್ ಕಾನ್‍ಸ್ಟಿಟ್ಯೂಷನ್) ಮತ್ತು ಲೋಹಗಳ ಸೂಕ್ಷ್ಮ ರಚನೆಯ ಪರೀಕ್ಷೆಗಳಿಗಾಗಿಯೇ ಬಲು ಹಿಂದಿನಿಂದಲೇ ಇರುವಂಥ ಶಿಷ್ಟ ವಿಧಾನವೆನಿಸಿದೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶನ ವಿಧಾನದ ಅನ್ವಯದಿಂದ ಲೋಹಗಳು ಸುನಮ್ಯವಾಗಿ ವಿಕೃತಿಗೊಳ್ಳುವುದರ ಸಂಬಂಧದಲ್ಲಿಯ ಪ್ರಾವಸ್ಥಾ ಬದಲಾವಣೆ ಹಾಗೂ ಕ್ರಿಯಾತಂತ್ರಗಳ ಬಗ್ಗೆ ಈಗ ಹೆಚ್ಚಿನ ಅರಿವು ಮೂಡಿದೆ. ಮೆಟಲೊಗ್ರಫಿಯ ವಿಧಾನಗಳು ಕೈಗಾರಿಕೆಯಲ್ಲಿಯ ವಿವಿಧ ಉತ್ಪಾದನಾ ಪ್ರಕ್ರಿಯೆಗಳ ನಿಯಂತ್ರಣದಲ್ಲಿ ಅದರಲ್ಲೂ ವಿಶೇಷವಾಗಿ ಉಷ್ಣಸಂಸ್ಕರಣೆಯಲ್ಲಿ ಬಳಕೆಯಾಗುವುದಿದೆ. ಈ ವಿಧಾನಗಳು ಲೋಹ ಪದಾರ್ಥಗಳ ಸೇವಾವೈಫಲ್ಯದಲ್ಲಿಯ ವಿಧಾನಗಳನ್ನು ಅಲೋಹ ಪದಾರ್ಥಗಳ ಅದರಲ್ಲೂ ಮುಖ್ಯವಾಗಿ ಮೃತ್ಕಲಾವಸ್ತುಗಳು (ಸಿರಾಮಿಕ್ಸ್) ಅರ್ಧವಾಹಕಗಳು (ಸೆಮಿ ಕಂಡಕ್ಟರ್ಸ್) ಮತ್ತು ಖನಿಜಗಳ ಪರೀಕ್ಷೆಗಾಗಿ ಅಳವಡಿಸಿಕೊಳ್ಳುವುದಿದೆ.

ಮೆಟಲೊಗ್ರಫಿಯ ವಿಧಾನಗಳನ್ನು ಸೂಕ್ಷ್ಮರಚನೆಗಳ ಪರಿಮಾಣಾತ್ಮಕ ಗುಣಲಾಕ್ಷಣೀಕರಣಕ್ಕಾಗಿಯೂ ಬಳಸಿಕೊಳ್ಳುವುದುಂಟು. ಇಂಥ ವಿಧಾನಗಳ ಅನ್ವಯದಲ್ಲಿ ಪ್ರಾತಿನಿಧಿಕ ಸೂಕ್ಷ್ಮಭಾಗಗಳು ವಿಶೇಷವಾಗಿ ಮುಖ್ಯಪಾತ್ರ ವಹಿಸುತ್ತವೆ.			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ